ಒಕ್ಕಲಿಗ ಮತಗಳು ಹೆಚ್ಚಾಗಿರುವ ರಾಮನಗರದಲ್ಲಿ ತಳವೂರಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಒಕ್ಕಲಿಗ ಮತಗಳನ್ನು ಸೆಳೆಯಲು ಈಗಾಗಲೇ ʼಉರಿಗೌಡ-ನಂಜೇಗೌಡʼ ಪಾತ್ರಗಳಿಗೆ ಭರ್ಜರಿ ಪ್ರಚಾರ ನೀಡುತ್ತಿದ್ದು, ಇದೀಗ ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಡಿಯಿಟ್ಟಿದೆ.
ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆಈಗಾಗಲೇ ಬಜೆಟ್ನಲ್ಲಿ ನಿಧಿ ಮೀಸಲಿಟ್ಟಿದ್ದು, ಶೀಘ್ರವೇ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಬಿಜೆಪಿ ಪ್ಲಾನ್ ಮಾಡಿದೆ.
ಹೇಳಿ ಕೇಳಿ ರಾಮಮಂದಿರ ಬಿಜೆಪಿಗೆ ಭರ್ಜರಿ ಮತಗಳನ್ನು ಗಳಿಸಿಕೊಟ್ಟಿರುವ ಯಶಸ್ವಿ ಸ್ಟ್ರಾಟರ್ಜಿ. ಇದನ್ನು ದಕ್ಷಿಣ ಭಾರತದಲ್ಲೂ ವಿಸ್ತರಿಸಿ ಮತ ಕೊಳ್ಳೆಗೆ ಯೋಜನೆ ಹಾಕಿಕೊಂಡಿದ್ದು, ಹಿಂದುತ್ವದ ಫೈರ್ ಬ್ರಾಂಡ್ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ರನ್ನು ಕರೆ ತರಲು ಯೋಜಿಸಿದೆ. ಚುನಾವಣಾ ನೀತಿಸಂಹಿತೆ ಘೋಷಣೆಗೆ ಮುನ್ನವೇ ಆದಿತ್ಯನಾಥ್ ರಿಂದ ಗುದ್ದಲಿ ಪೂಜೆ ನೆರವೇರಿಸಲು ಬಿಜೆಪಿ ಸಜ್ಜಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇರುವ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಬಿಜೆಪಿಗೆ ಹೇಗೆ ಪ್ರಯೋಜನ ತಂದು ಕೊಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.