ʼಟಿಪ್ಪು ನಿಜ ಕನಸುಗಳುʼ ಎಂಬ ವಿವಾದಾತ್ಮಕ ನಾಟಕ ಬರೆದಿರುವ ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ, ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ನಿರ್ಮಲಾನಂನಾಥ ಸ್ವಾಮೀಜಿ ಬಗ್ಗೆ ವಿವಾದದಾತ್ಮಕ ಹೇಳಿಕೆ ನೀಡಿದ್ದಾರೆ.
‘ಅವರು (ನಿರ್ಮಲಾನಂದನಾಥರು) ಒಕ್ಕಲಿಗ ಸಮುದಾಯದ ಸ್ವಾಮೀಜಿ. ಆ ಸ್ವಾಮೀಜಿ ಇರುವುದೇ ಒಕ್ಕಲಿಗ ಸಮಾಜಕ್ಕಾಗಿ, ಬೇರೆ ಜಾತಿಗಳಿಗೆ ಅಲ್ಲ, ಒಕ್ಕಲಿಗ ಸಮುದಾಯವನ್ನು ಒಂದಾಗಿ ಇಟ್ಟುಕೊಳ್ಳುವುದು ಅವರ ಕೆಲಸ, ಅದನ್ನು ಅವರು ಮಾಡಿದ್ದಾರೆ” ಎಂದು ಕಾರ್ಯಪ್ಪ ಹೇಳಿದ್ದಾರೆ.
ಕನ್ನಡದ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ ಕಾರ್ಯಪ್ಪ, ಇದು ಸಂಪೂರ್ಣ ಜಾತಿ ರಾಜಕಾರಣದ ಪ್ರಸಂಗ, ಒಕ್ಕಲಿಗರನ್ನು ಒಗ್ಗಟ್ಟಾಗಿರಿಸುವುದು ಸ್ವಾಮೀಜಿ ಕೆಲಸ ಎಂದಿದ್ದಾರೆ.
“ಹೆಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ, ಡಿಕೆಶಿವಕುಮಾರ್ ರನ್ನು ಪದೇ ಪದೇ ಕರೆದು ಸ್ವಾಮೀಜಿ ಮನವೊಲಿಸುತ್ತಿದ್ದರು. ಒಕ್ಕಲಿಗ ಮುಖ್ಯಮಂತ್ರಿ ಆಗುವುದೇ ಅಪರೂಪ, ಅವರಿಗೆ ತೊಂದರೆ ಕೊಡಬಾರದೆಂದು ಮತ್ತೊಬ್ಬ ಒಕ್ಕಲಿಗ ಮುಖಂಡರಾದ ಡಿಕೆಶಿ ಬಳಿ ಅವರು ಹೇಳುತ್ತಿದ್ದರು. ಆದರೆ, ಕುರುಬರು ಇವರ ಮಾತು ಕೇಳುವುದಿಲ್ಲ, ಹಾಗಾಗಿ, ಸಿದ್ದರಾಮಯ್ಯ ಇವರಿಗೆ ಬತ್ತಿ ಇಟ್ರು. ಸಿದ್ದರಾಮಯ್ಯ ಅವರಿಗೆ ಬೇರೆನೇ ಸ್ವಾಮೀಜಿ ಇದ್ದಾರೆ” ಎಂದು ಕಾರ್ಯಪ್ಪ ಹೇಳಿದ್ದಾರೆ.