ನವದೆಹಲಿ: ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ನೀಡಿದ್ದ ಅವಧಿ ಮುಗಿಯುವ ಎರಡು ದಿನಗಳ ಮೊದಲೇ ಮತ್ತೆ ಗಡುವು ವಿಸ್ತರಣೆಯಾಗಿದೆ. ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರವು ಮಾರ್ಚ್ 31ರ ಬದಲು ಜೂನ್ 30ರವರೆಗೆ ವಿಸ್ತರಿಸಲಾಗಿದೆ.
ಜುಲೈ 1ರ ನಂತರವೂ ನಿಮ್ಮ ಕಾರ್ಡ್ ಜೋಡಣೆ ಆಗದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 2022ರ ಮಾರ್ಚ್ 31ರವರೆಗೆ ಉಚಿತವಾಗಿತ್ತು. 2022ರ ಏಪ್ರಿಲ್ 1ರಿಂದ 500 ರೂ. ಪಾವತಿಸಿ ಆಧಾರ್ ಲಿಂಕ್ ಮಾಡಬೇಕಾಗಿತ್ತು. 2022ರ ಜೂನ್‌ನಿಂದ 2023ರ ಮಾರ್ಚ್ 31ರವರೆಗೆ ಲಿಂಕ್ ಮಾಡಬೇಕಾದರೆ 1,000 ರೂ. ಪಾವತಿಸಬೇಕು ಎಂದು ಹೇಳಲಾಗಿತ್ತು. ಒಂದು ವೇಳೆ ಈ ಗಡುವಿನ ಒಳಗೆ ಲಿಂಕ್ ಮಾಡದಿದ್ದರೆ ಆ ನಂತರ ಬರುವ ಅರ್ಜಿಗಳಿಗೆ 10 ಸಾವಿರ ರೂ. ದಂಡ ಹಾಕಲಾಗುವುದು ಎಂದು ತಿಳಿಸಲಾಗಿತ್ತು.
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ, ಪ್ಯಾನ್ ಜತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿತ್ತು