ಬೆಂಗಳೂರು: ನಂದಿನಿ ಹಾಲಿಗೆ ನಮ್ಮ ಕನ್ನಡಿಗರ ಮನಸಿನಲ್ಲಿ ಬೇರೆಯದೇ ಸ್ಥಾನವಿದೆ. ಕೆಎಂಎಫ್ ಸಂಸ್ಥೆ ನಮ್ಮ ರಾಜ್ಯದ ಹೆಮ್ಮೆಯ ಸಂಸ್ಥೆಯಾಗಿದ್ದು, ನಾವೆಲ್ಲರೂ ಕೆಎಂಎಫ್ ಪರ ನಿಲ್ಲಬೇಕಿದೆ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ. ನಂದಿನಿ-ಅಮುಲ್ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಅವರು, ನಂದಿನಿ ಹಾಲಿನೊಡನೆ ನಮ್ಮ ಸುಂದರವಾದ ನೆನಪುಗಳಿದ್ದು, ತಾಯಿ ಎದೆಹಾಲಿನ ಬಳಿಕ ನಾನು ಕುಡಿದಿದ್ದೇ ನಂದಿನಿ ಹಾಲು ಎಂದು ನುಡಿದಿದ್ದಾರೆ.
ಅಮುಲ್ ಉತ್ಪನ್ನಗಳು ರಾಜ್ಯದ ಮಾರುಕಟ್ಟೆಗೆ ಕಾಲಿಡುತ್ತಿದೆ. ಇದೇ ವೇಳೆಯಲ್ಲಿ ನಂದಿನಿ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವೂ ಉಂಟಾಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪವೂ ವ್ಯಕ್ತವಾಗಿದೆ.
ನಟಿ ಸಂಜನಾ ಗಲ್ರಾನಿ ಕೂಡ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ರೈತರ ಕಷ್ಟದ ಫಲವೇ ನಂದಿನಿ ಹಾಲಿನ ಸಂಸ್ಥೆ. ನಂದಿನಿ ಎಂದರೆ ನಮ್ಮ ತಾಯಿಯಿದ್ದಂತೆ. ಯಾರೋ ಬಂದ ಮಾತ್ರಕ್ಕೆ ನಮ್ಮ ತಾಯಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಇಂಥಾ ಸಮಯದಲ್ಲಿ ಕನ್ನಡಿಗರು ಒಗ್ಗಟ್ಟು ಪ್ರದರ್ಶಿಸಬೇಕಿದ್ದು, ನಂದಿನಿ ಸಂಸ್ಥೆಯ ಪರವಾಗಿ ನಿಲ್ಲಬೇಕಿದೆ ಎಂದಿದ್ದಾರೆ.