ಹೈದರಾಬಾದ್ : ನಟನೆ ಹಾಗೂ ಗ್ಲಾಮರ್ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ಸಮಂತಾ ಋತ್ ಪ್ರಭು (Samantha Ruth Prabhu), ಕೇವಲ ಒಳ್ಳೆಯ ನಟಿ ಮಾತ್ರವಲ್ಲದೆ ಟಿವಿ ನಿರೂಪಕಿ (Host) ಹೌದು. ಅಸಲಿಗೆ ಸಮಂತಾ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದೇ ಕಾರ್ಯಕ್ರಮ ನಿರೂಪಕಿಯಾಗಿ, ಆ ಬಳಿಕ ಮಾಡೆಲಿಂಗ್ ಹಾಗೂ ಸಿನಿಮಾ ರಂಗಕ್ಕೆ ಪ್ರವೇಶ ಪಡೆದರು. ಸಿನಿಮಾ ಸ್ಟಾರ್ ಆದ ಮೇಲೂ ಅವರು ಕಿರುತೆರೆಯನ್ನು ಮರೆತಿಲ್ಲ. ಇದೀಗ ಮತ್ತೊಂದು ಹೊಸ ಟಾಕ್ ಶೋ ಹಾಗೂ ಪಾಡ್‌ಕಾಸ್ಟ್ ಮೂಲಕ ಅವರು ಕಿರುತೆರೆ ಮತ್ತು ಒಟಿಟಿ ಲೋಕಕ್ಕೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಬಿಗ್‌ಬಾಸ್ ನಿರೂಪಣೆಯಿಂದ ಸ್ಯಾಮ್ ಜಾಮ್‌ವರೆಗೆ ಜರ್ನಿ
ಹಲವು ಟಿವಿ ಶೋಗಳನ್ನು ಯಶಸ್ವಿಯಾಗಿ ಮುನ್ನಡೆಸಿರುವ ಸಮಂತಾ, ಹಿಂದೆ ನಾಗಾರ್ಜುನ ಅವರ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿ ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಇದಲ್ಲದೆ, ಪ್ರಖ್ಯಾತ ಆಹಾ (Aha) ಒಟಿಟಿ ಸಂಸ್ಥೆಗಾಗಿ ಸ್ಯಾಮ್ ಜಾಮ್ ಹೆಸರಿನ ಜನಪ್ರಿಯ ಟಾಕ್ ಶೋ ನಡೆಸಿಕೊಟ್ಟಿದ್ದರು. ಇದರಲ್ಲಿ ಚಿತ್ರರಂಗದ ಸಾಲು ಸಾಲು ಸ್ಟಾರ್ ನಟ-ನಟಿಯರನ್ನು ಆಹ್ವಾನಿಸಿ, ಸಖತ್ ಮಜವಾಗಿ ಸಂದರ್ಶನ ಮಾಡಿದ್ದರು. ಇದರ ಜೊತೆಗೆ ಯೂಟ್ಯೂಬ್ ಹಾಗೂ ಒಟಿಟಿಯಲ್ಲಿ ಹೆಲ್ತ್ ಪಾಡ್‌ಕಾಸ್ಟ್ ಒಂದನ್ನೂ ಸಹ ನಡೆಸಿಕೊಟ್ಟಿದ್ದಾರೆ.
ಈ ಬಾರಿ ತೆಲುಗಲ್ಲ, ತಮಿಳಿನಲ್ಲಿ ಹೊಸ ಶೋ
ಕಳೆದ ಬಾರಿ ತೆಲುಗಿನಲ್ಲಿ ಟಾಕ್ ಶೋ ಮಾಡಿದ್ದ ಸಮಂತಾ, ಈ ಬಾರಿ ತಮಿಳು ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗುತ್ತಿದ್ದಾರೆ. ತಮಿಳು ಸಮಂತಾ ಅವರ ಮಾತೃಭಾಷೆ ಆಗಿರುವುದರಿಂದ ಈ ಬಾರಿ ಶೋ ನಡೆಸುವುದು ಅವರಿಗೆ ಮತ್ತಷ್ಟು ಸುಲಭ ಮತ್ತು ಆಪ್ತವಾಗಲಿದೆ. ಪ್ರಖ್ಯಾತ ಒಟಿಟಿ ಸಂಸ್ಥೆಯಾದ ಸೋನಿ ಲಿವ್ (Sony LIV) ಗಾಗಿ ಸಮಂತಾ ಈ ನೂತನ ಟಾಕ್ ಶೋ ನಡೆಸಿಕೊಡಲಿದ್ದಾರೆ.
ಈ ಹೊಸ ಶೋ ಕೇವಲ ತಮಾಷೆಯಷ್ಟೇ ಅಲ್ಲದೆ, ತುಸು ಭಾವುಕತೆಯಿಂದಲೂ ಕೂಡಿರಲಿದೆ. ಶೋಗೆ ಬರುವ ಅತಿಥಿಗಳ ಖಾಸಗಿ ಜೀವನದ ಏಳುಬೀಳುಗಳು, ಅನುಭವಗಳು ಹಾಗೂ ಭಾವನೆಗಳ ಕುರಿತು ಸಮಂತಾ ಚರ್ಚಿಸಲಿದ್ದಾರೆ. ಅಲ್ಲದೆ, ಇದೊಂದು ಟಾಕ್ ಶೋ ಮಾತ್ರವಲ್ಲದೆ ಪಾಡ್‌ಕಾಸ್ಟ್ ಮಾದರಿಯಲ್ಲೂ ಇರಲಿದ್ದು, ಆರೋಗ್ಯ ಮತ್ತು ಜೀವನಶೈಲಿಯ ಕುರಿತು ಸಾಕಷ್ಟು ಉಪಯುಕ್ತ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.
ಶೂಟಿಂಗ್ ಯಾವಾಗ?
ಸಮಂತಾ ಅವರ ವೈಯಕ್ತಿಕ ಜೀವನದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಅವರು ಈ ಹೊಸ ಟಾಕ್ ಶೋನ ಚಿತ್ರೀಕರಣವನ್ನು ತಕ್ಷಣವೇ ಪ್ರಾರಂಭಿಸಲಿದ್ದಾರೆಯೇ ಅಥವಾ ಕೆಲ ತಿಂಗಳುಗಳ ಕಾಲ ವಿರಾಮ ತೆಗೆದುಕೊಂಡು, ಒಂದು ವರ್ಷದ ಬಳಿಕ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆಯೇ ಎಂಬ ಕುರಿತು ಇನ್ನು ಅಧಿಕೃತ ಖಾತ್ರಿ ಸಿಗಬೇಕಿದೆ.
ಮಾ ಇಂಟಿ ಬಂಗಾರಂ ಚಿತ್ರದ ಭರ್ಜರಿ ಯಶಸ್ಸು
ಇತ್ತೀಚೆಗಷ್ಟೇ ಸಮಂತಾ ನಟಿಸಿದ್ದ ಮಾ ಇಂಟಿ ಬಂಗಾರಂ (Maa Inti Bangaram) ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರಕ್ಕೆ ಸಮಂತಾ ಅವರ ಪತಿ ರಾಜ್ ನಿಡುಮೋರು ಬಂಡವಾಳ ಹೂಡಿದ್ದು, ಸ್ವತಃ ಸಮಂತಾ ಕೂಡ ಸಹ-ನಿರ್ಮಾಪಕಿಯಾಗಿ ಜವಾಬ್ದಾರಿ ನಿಭಾಯಿಸಿದ್ದರು. ಪ್ರಖ್ಯಾತ ನಿರ್ದೇಶಕಿ ನಂದಿನಿ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸಿದ್ದರು. ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸಮಂತಾ ಹೊಸ ಶೋ ಒಪ್ಪಿಕೊಂಡಿರುವುದು ಅವರ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿಯಾಗಿದೆ.
ಇದನ್ನೂ ಓದಿ: ಕರಾವಳಿ ತೀರದಲ್ಲಿ ಕುಳಿತ ರಾಧಿಕಾ ಪಂಡಿತ್, ವೈರಲ್ ಆಯ್ತು ಪೋಸ್ಟ್!