ಪ್ರತಿಬಾರಿಯಂತೆ ಈ ಬಾರಿಯೂ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಮ್ಯಾ ಚುನಾವಣಾ ಸ್ಪರ್ದೆಯ ಸಂಭವನೀಯತೆ ಬಗ್ಗೆ ಚರ್ಚೆ ಶುರುವಾಗಿದೆ. ಮತ್ತೆ ರಾಜಕೀಯಕ್ಕೆ ರಮ್ಯಾ ಮರುಪ್ರವೇಶ ಮಾಡಲಿದ್ದಾರೆಂಬ ಊಹಾಪೋಹಗಳು ರಮ್ಯಾ ಸಿನಿ ಅಭಿಮಾನಿಗಳಲ್ಲಿ ರೋಮಾಂಚನ ಹುಟ್ಟಿಸಿವೆ.
ಇತ್ತೀಚಿಗೆ ಪ್ರಸಕ್ತ ರಾಜಕಾರಣ ಹಾಗೂ ಸಿನಿಮಾ ಎರಡರಿಂದಲೂ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದ ರಮ್ಯಾ ಬಹುತೇಕ ಜನರ ಮನಸಿನಿಂದ ಕಣ್ಮರೆಯಾಗಿದ್ದರು. ಕೆಲವೇ ತಿಂಗಳ ಹಿಂದಷ್ಟೇ ಕಾಂಗ್ರೆಸ್ ನಾಯಕರ ನಡುವೆ ರಮ್ಯಾ ಕಚ್ಚಾಟ ಕೂಡ ನಡೆದಿತ್ತು. ಕಾಂಗ್ರೆಸ್ ಜಾಲತಾಣ ವಿಭಾಗದೊಡನೆ ಶರಂಪರ ಜಗಳವಾಡಿಕೊಂಡಿದ್ದ ರಮ್ಯಾ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯ ಸಹ ಕೇಳಿಬಂದಿತ್ತು. ಇನ್ನು ಕಾಂಗ್ರೆಸ್ ಪಕ್ಷ ರಮ್ಯಾ ಪಾಲಿಗೆ ಮುಚ್ಚಿದ ಬಾಗಿಲಷ್ಟೇ ಎಂಬ ಜನರ ಊಹೆಯನ್ನು ಸುಳ್ಳು ಮಾಡಿರುವ ರಮ್ಯಾ ಪುನರಾಗಮನದ ವಾರ್ತೆ ಕಾಂಗ್ರೆಸ್ ಪಾಳಯದಲ್ಲಿ ಗುಲ್ಲೆಬ್ಬಿಸಿದೆ.
ಒಕ್ಕಲಿಗರ ಮತ ಕ್ರೋಡೀಕರಣದ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಅಥವಾ ಪದ್ಮನಾಭನಗರ ಕ್ಷೇತ್ರದಲ್ಲಿ ರಮ್ಯಾ ಉಮೇದುವಾರಿಕೆ ಘೋಷಿಸುವ ಬಗ್ಗೆ ಕಾಂಗ್ರೆಸ್‍ನಲ್ಲಿ ಚರ್ಚೆ ನಡೆದಿದೆ. ಇನ್ನು 2-3 ದಿನಗಳಲ್ಲಿ ಕಾಂಗ್ರೆಸ್ ಮೊದಲ ಪಟ್ಟಿ ಹೊರಬೀಳಲಿದ್ದು ಅದರಲ್ಲಿ ರಮ್ಯ ಸ್ಥಾನ ಪಡೆಯುವರೋ ಇಲ್ಲವೋ ಕಾದು ನೋಡಬೇಕಿದೆ.