ಕರ್ನಾಟಕದಲ್ಲಿ ರಾಜಕೀಯ ಬೇಡ ಪ್ರಜಾಕೀಯ ಬೇಕು ಎಂದು ಹೊಸ ರಾಜಕೀಯ ಸಾಹಸ ಮಾಡು ತ್ತಿರುವ ನಟ ಉಪೇಂದ್ರ ವಿಧಾನಸಭೆ ಚುನಾವಣೆ ಮತ ಎಣಿಕೆ ವಿಚಾರದಲ್ಲಿ ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದ್ದಾರೆ.
“ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟವಾಗುತ್ತೆ .ಮತ ಎಣಿಕೆಗೆ ಎರಡು ದಿನ ಬೇಕೆ ?! ಏಕೆಂದು ಬಲ್ಲವರು ತಿಳಿಸುತ್ತೀರಾ ?” ಎಂದು ಉಪೇಂದ್ರ ಟ್ವೀಟ್ ಮಾಡಿದ್ದರು.
ಇದಕ್ಕೆ ಹಲವರು ತೀಕ್ಷ್ಣವಾಗಿ ಉತ್ತರಿಸಿದ್ದು, ನೀವು ಯಾಕೆ ಶೂಟಿಂಗ್ ಆದ ತಕ್ಷಣಕ್ಕೆ ಫಿಲ್ಮ್ ರಿಲೀಸ್ ಮಾಡಲ್ಲ, ಹಾಗೆಯೇ ಇದು..ಎಂದು ಉತ್ತರಿಸಿದ್ದಾರೆ.
ಕರ್ನಾಟಕದ ಎಲ್ಲ ಕಡೆಯಿಂದ ಮತ ಪೆಟ್ಟಿಗೆಗಳನ್ನು ಒಂದೆಡೆ ಸುರಕ್ಷಿತವಾಗಿ ತರಿಸಿ.. ಎಣಿಕೆಗೆ ವ್ಯವಸ್ಥೆ ಮಾಡಬೇಕು …ಎಲ್ಲಾದರೂ ಅಹಿತಕರ ಘಟನೆ ನಡೆದಲ್ಲಿ, ಮರು ಮತದಾನ ಮಾಡಬೇಕು, ಹಾಗಾಗಿ ಎರಡು ದಿನ ಬೇಕಾಗುತ್ತದೆ . ಹೀಗೆಲ್ಲ ಬಾಲಿಶ ಸ್ಟೇಟ್ಮೆಂಟ್ ಗಳು ನಿಮ್ಮ ಗೌರವವನ್ನು ಕಡಿಮೆ ಮಾಡುತ್ತದೆ ಎಂದು ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಉಪೇಂದ್ರರನ್ನು ಅವಹೇಳಿಸಿ ಪ್ರತಿಕ್ರಿಯಿಸಿದ್ದು ಉಪ್ಪಿ ಅಸಮಾಧಾನಕ್ಕೆ ಕಾರಣವಾಗಿದೆ.
“ಡಿಜಿಟಲ್ ವೋಟಿಂಗ್ ಅಲ್ವಾ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ.. ಏನು ಕಾಮೆಂಟ್ಸ್ ಗಳು ?! ವಾರೆ ವಾಹ್ … ʼ ಎಂದು ತಮ್ಮ ಅಸಮಾಧಾನವನ್ನು ಉಪ್ಪಿ ಹೊರ ಹಾಕಿದ್ದಾರೆ.
ಅಲ್ಲದೆ, “ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂಬಾಲಕರು, ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ” ಎಂದು ಸವಾಲು ಹಾಕಿದ್ದಾರೆ.