ಬೆಂಗಳೂರು: ನಾನು ಬಿಜೆಪಿ ಪರ ಸೇರುತ್ತಿದ್ದೇನೆ ಎಂಬ ಮಾತು ಸಂಪೂರ್ಣ ಸುಳ್ಳು ಎನ್ನುವ ಮೂಲಕ ಚಿತ್ರನಟ ಸುದೀಪ್ ಊಹಾಪೋಹಗಳಿಗೆ ತೆರೆಯೆಳಿದಿದ್ದಾರೆ. ಬುಧವಾರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದು ನಿಜವಾದರೂ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಾಗಲೀ, ಒಂದು ಪಕ್ಷದ ಪರ ಪ್ರಚಾರಮಾಡುವುದಾಗಲೀ ಮಾಡುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಚಿಕ್ಕವಯಸಿನಿಂದಲೂ ಹಲವರು ನನ್ನೊಡನೆ ಕಷ್ಟಕಾಲದಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಅಂಥವರು ನನ್ನೊಡನೆ ಆಗಾಗಲೇ ಭೇಟಿಯಾಗುವುದು ಸಹಜ. ಹಾಗೆಂದ ಮಾತ್ರಕ್ಕೇ ನಾನು ಯಾವುದೋ ಪಕ್ಷದ ಪರ, ವ್ಯಕ್ತಿಯ ಪರ ಪ್ರಚಾಕ್ಕೆ ಇಳಿಯುತ್ತೇನೆಂದು ಅರ್ಥವಲ್ಲ ಎಂದು ನುಡಿದ ಸುದೀಪ್, ನಾನು ಈಗ ಮೂರು ಸಿನಿಮಾಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ ಎಂದರು. ಚುನಾವಣಾ ಟಿಕೆಟ್‍ಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಸಿನಿಮಾ ಟಿಕೆಟ್ ಕೇಳಬಹುದಷ್ಟೇ ಎಂದು ನಗೆಯಾಡಿದ ಸುದೀಪ್, ಟಿಕೆಟ್‍ಗಾಗಿ ಬೇಡಿಕೆಯಟ್ಟಿರುವ ವದಂತಿಯನ್ನೂ ಅಲ್ಲಗಳೆದರು.
ನಾನು ಮಾತ್ರವಲ್ಲ ಜನರ ಪ್ರೀತಿ ಸಂಪಾದಿಸಿರುವ ಪ್ರತಿಯೊಬ್ಬ ಕಲಾವಿದನಿಗೂ ರಾಜಕೀಯ ಸೇರುವ ಒತ್ತಡ ಬರುವುದು ಸಹಜ. ಆದರೆ ನಾನು ಇದುವರೆಗೂ ಅಂಥ ಯಾವುದೇ ಕಾರ್ಯಕ್ಕೆ ಕೈಹಾಕಿಲ್ಲ ಎಂದು ಸುದೀಪ್ ನುಡಿದಿದ್ದಾರೆ.