Thursday, March 20, 2025
Homeಬೆಂಗಳೂರುಬಿಜೆಪಿ ಸೇರೋಲ್ಲ – ಬೊಮ್ಮಾಯಿ ಮಾಮನ್ನ ಬಿಡೋಲ್ಲ : ಸುದೀಪ್ ಸ್ಪಷ್ಟನೆ

ಬಿಜೆಪಿ ಸೇರೋಲ್ಲ – ಬೊಮ್ಮಾಯಿ ಮಾಮನ್ನ ಬಿಡೋಲ್ಲ : ಸುದೀಪ್ ಸ್ಪಷ್ಟನೆ

ಬೆಂಗಳೂರು : ಚಿಕ್ಕವಯಸಿನಿಂದಲೂ ನನ್ನ ಕುಟುಂಬಕ್ಕೆ ಬೆಂಬಲವಾಗಿ ನಿಂತಿರುವಂತಹ, ಚಿತ್ರರಂಗದಲ್ಲಿ ನಾನು ಕಷ್ಟದ ಸಮಯದಲ್ಲಿ ಇದ್ದಾಗಿನಿಂದಲೂ ಜೊತೆಯಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಪರ ನಾನು ನಿಂತುಕೊಳ್ಳುತ್ತಿದ್ದೇನೆ ಎಂದು ಚಿತ್ರನಟ ಸುದೀಪ್ ಸ್ಪಷ್ಟೀಕರಣ ನೀಡಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುದೀಪ್ ಬಿಜೆಪಿ ಸೇರ್ಪಡೆ ಊಹಾಪೋಹಕ್ಕೆ ತೆರೆಯೆಳೆದಿದ್ದು, ನನ್ನ ಬೆಂಬಲ ಬೊಮ್ಮಾಯಿ ಅವರಿಗೆ ಮಾತ್ರವೇ ಹೊರತು ಬಿಜೆಪಿ ಪಕ್ಷಕ್ಕಲ್ಲ ಎಂದರು.
ಮೊದಲು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಟ ಸುದೀಪ್ ನಿರ್ಣಯದ ಬಗ್ಗೆ ಈಗಾಗಲೇ ಮಾಧ್ಯಮಗಳು ಸರಿಯಾಗಿಯೇ ಊಹಿಸಿವೆ. ಇಂದು ನಿಮ್ಮೆಲ್ಲರ ಸಮ್ಮುಖದಲ್ಲಿ ಸುದೀಪ್ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ ಎಂದರು.
ಬಳಿಕ ಮಾತನಾಡಿದ ಸುದೀಪ್, ನಾನು ಸಣ್ಣವಯಸಿನಿಂದಲೂ ಬೊಮ್ಮಾಯಿ ಅವರನ್ನು ಮಾಮ ಎಂದೇ ಸಂಬೋಧಿಸುತ್ತಿದ್ದೇನೆ. ಹೀಗಾಗಿ ನಮ್ಮ ಆಪ್ತತೆಯನ್ನು ತಪ್ಪಾಗಿ ಭಾವಿಸಬಾರದು ಎಂದು ಮನವಿ ಮಾಡಿದ್ದಲ್ಲದೇ, ಮಾಮ ನಮ್ಮ ಕುಟುಂಬದೊಡನೆ ಮೊದಲ ಬಾರಿ ಭೇಟಿಯಾದಾಗ ಅವರಿನ್ನೂ ರಾಜಕೀಯ ಪ್ರವೇಶಿಸುತ್ತಿದ್ದರು. ಆಗಿನಿಂದಲೂ ನಮ್ಮೊಡನೆ ಕಷ್ಟ ಸುಖದಲ್ಲಿ ನಿಂತಿದ್ದಾರೆ. ಅವರ ವ್ಯಕ್ತಿತ್ವ, ಸ್ಥಾನ, ಹಿರಿತನವನ್ನು ನಾನು ಗೌರವಿಸುತ್ತೇನೆ. ಮನೆಯಲ್ಲಿ ಹಿರಿಯರಾದ ತಂದೆ ಹೇಳಿದರೆ ಹೇಗೆ ನಾವು ಪಾಲಿಸುತ್ತೇವೋ ಅದೇ ರೀತಿ ನಾನು ವೈಯಕ್ತಿಕವಾಗಿ ಬೊಮ್ಮಾಯಿಯವರ ನಿರ್ದೇಶನದಂತೆ ನಡೆಯುತ್ತಿದ್ದೇನೆ ಎಂದರು.
ಒಟ್ಟಾರೆ ಬೊಮ್ಮಾಯಿ ಪರವಾಗಿ ತಮ್ಮ ಬೆಂಬಲವನ್ನು ಸ್ಪಷ್ಟವಾಗಿ ದೃಢೀಕರಿಸಿದ ಸುದೀಪ್, ಪಕ್ಷ ಸೇರುವ ಪಕ್ಷದ ಪರ ಪ್ರಚಾರಗಳಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಖಚಿತ ನಿಲುವನ್ನು ಬಹಿರಂಗಪಡಿಸಲಿಲ್ಲ. ಕಳೆದೆರೆಡು ದಿನಗಳಿಂದ ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಹಲವು ಊಹಾಪೋಹಗಳೆದ್ದಿತ್ತು. ಸ್ವತಃ ಸುದೀಪ್ ಅವರ ಕುಟುಂಬದ ಸದಸ್ಯರೊಬ್ಬರು ಸ್ಪರ್ಧಿಸಲಿದ್ದಾರೆ ಎಂಬ ವದಂತಿಯೂ ಕೇಳಿಬಂದಿತ್ತು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಸುಧಾಕರ್, ಸಚಿವ ಆರ್ ಅಶೋಕ್ ಸಹ ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ

error: Content is protected !!