ಬಿಜೆಪಿಗರ ಉರಿಗೌಡ, ನಂಜೇಗೌಡ ಪ್ರಚಾರಕ್ಕೆ ಬಹುಭಾಷಾ ನಟ ಕಿಶೋರ್ ಪ್ರತಿಕ್ರಿಯಿಸಿದ್ದು, ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ? ಎಂದು ಪ್ರಶ್ನಿಸಿದ್ದಾರೆ.
ಯಾವುದೋ ಕಾಲದ ರಾಜರ ಹೆಸರಲ್ಲಿ ಇಂದಿನ ರಾಜಕೀಯ. ಇದು ಇಂದಿನ ಪ್ರಜಾಪ್ರಭುತ್ವ. ನಂಜೇಗೌಡ ಉರಿಗೌಡರ ಸೃಷ್ಟಿ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಯತ್ನವೇ?ಇತ್ತ ಟಿಪ್ಪುವನ್ನು ಕೊಂದವರೆಂದು ಹೇಳಿ ಮುಸ್ಲಿಮರನ್ನೂ ಒಕ್ಕಲಿಗರನ್ನೂ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುತ್ತಲೇ ಒಕ್ಕಲಿಗರು ಬ್ರಿಟೀಷರ ಪರವಾಗಿದ್ದರೆಂದು ಹೇಳಿ ಮುಂದೊಂದು ದಿನ ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ? ಎಂದು ಕಿಶೋರ್ ಕೇಳಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ ಅವರು, “ಮೊದಲು ಹಿಂದೂ ಮುಸ್ಲಿಂ ಅಂದರು ಮನೆಯ ಸದಸ್ಯರನ್ನು ಎತ್ತಿಕಟ್ಟಿದರು, ಗಾಂಧಿಯೆಂದರು, ಗಾಂಧಿ ಕೊಂದರು, ರೈತರನ್ನು ಭಯೋತ್ಪಾದಕರೆಂದರು, ಉರಿ ಹೊತ್ತಿಸಿದರು, ನಂಜು ಕಾರಿದರು, ಒಕ್ಕಲಿಗರೆಂದರು, ಟಿಪ್ಪುವೆಂದರು, ಬಿಹಾರಿಗಳೆಂದರು, ತಮಿಳರೆಂದರು, ಧರ್ಮವೆಂದರು, ಜಾತಿಯೆಂದರು, ದಲಿತರೆಂದರುಮ ಭಾಷೆಯೆಂದರು, ದೇಶವೆಂದರು, ಇತಿಹಾಸ ತಿರುಚಿದರು, ಸುಳ್ಳು ಸುದ್ದಿ ಹರಡಿದರು . ಕೇವಲ ಅಧಿಕಾರದಾಸೆಯಿಂದ ಸರ್ವಜನಾಂಗದ ಶಾಂತಿಯ ತೋಟವನ್ನು ಕದಡಿ, ವಸುದೇವ ಕುಟುಂಬಕಂನ ಹೆಮ್ಮೆಯ ಕುಟುಂಬವನ್ನು ಮುರಿಯಲು ಬರುತ್ತಿದ್ದಾರೆ. ಮಾಡಿದ ಕೆಲಸದ ಮೇಲೆ ಮತ ಯಾಚಿಸಲು ಯೋಗ್ಯತೆಯಿಲ್ಲದ ಧರ್ಮಾಂಧ ಮನೆಹಾಳರು.. ಚುನಾವಣೆಯ ಕಾಲವಿದು ಎಚ್ಚರ..” ಎಂದು ಕಿಶೋರ್ ಬರೆದಿದ್ದಾರೆ.