ಹಿಂದುತ್ವದ ವಿರುದ್ಧ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಜೈಲು ಸೇರಿದ್ದ ನಟ ಚೇತನ್ ಅಹಿಂಸೆ ಗುರುವಾರ ರಾತ್ರಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಹೂಹಾರ ಹಾಕಿ, ಪೇಟ ತೊಡಿಸಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಚೇತನ್ ಅಹಿಂಸಾ, ಈ ರೀತಿ ಜೈಲಿಗೆ ಹೋಗುವುದು ನನಗಿದು ಹೊಸತೇನಲ್ಲ. ಸಮಾನತೆಗಾಗಿ ಎಷ್ಟು ಬಾರಿ ಬೇಕಾದರೂ ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ. ಅನ್ಯಾಯದ ವಿರುದ್ಧ ಹೋರಾಟ ಮುಂದುವರೆಸಲಿದ್ದೇನೆ. ಕಳೆದ ವರ್ಷವೂ ಸಹ ಏಳು ದಿನ ಜೈಲಿನಲ್ಲಿದ್ದೆ. ತಂದೆ ಪೆರಿಯಾರ್ ಅವರು ಕೂಡ ಹದಿನೈದು ವರ್ಷದಲ್ಲಿ ಇಪ್ಪತ್ತು ಬಾರಿ ಜೈಲಿಗೆ ಹೋಗಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಹಲವು ಕಷ್ಟಗಳನ್ನು ಎದುರಿಸಿದ್ದಾರೆ. ಹುತಾತ್ಮ ಭಗತ್ ಸಿಂಗ್ ಕೂಡ ಸೆರೆಮನೆ ಕಂಡಿದ್ದಾರೆ. ಇವರೆಲ್ಲರ ಮಾರ್ಗದರ್ಶನದಲ್ಲಿ ಸಾಗುತ್ತೇನೆ. ಹೋರಾಟಗಾರರಿಗೆ ಸೆರೆಮನೆಯೇ ಅರಮನೆ ಎಂದರು.
ಭಾರತದ ಪ್ರಜಾಪ್ರಭುತ್ವ ವಿಶ್ವದಲ್ಲೇ ಅತ್ಯುತ್ತಮ ಪ್ರಜಾಪ್ರಭುತ್ವವಾಗಿದ್ದು, ಇಂದು ಅದನ್ನು ನುಚ್ಚು ನೂರು ಮಾಡಲಾಗುತ್ತಿದೆ ಎಂದು ನುಡಿದ ನಟ ಚೇತನ್, ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದರು.
ಬಳಿಕ ಹಿಂದುತ್ವದ ಬಗ್ಗೆ ತಾವು ನೀಡಿರುವ ಹೇಳಿಕೆ ಧರ್ಮ ನಿಂದನೆಯಲ್ಲ ಎಂದು ಸಮರ್ಥಿಸಿಕೊಂಡ ಚೇತನ್, ಹಿಂದುತ್ವ ಬೇರೆ ಹಿಂದೂ ಧರ್ಮವೇ ಬೇರೆ ಎಂದು ಪ್ರತಿಪಾದಿಸಿದರು. ಹಿಂದುತ್ವ ಎಂಬುದು ನೂರು ವರ್ಷದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಿದ್ದಾಂತ ಅಷ್ಟೇ ಎಂದರು.
ಪ್ರತ್ಯೇಕ ಲಿಂಗಾಯತ ಧರ್ಮದಂತೆ ಪ್ರತ್ಯೇಕ ಹಿಂದೂ ಧರ್ಮ ಬೇಕಿದ್ದರೆ ಹೇಳಿ, ಆ ಬಗ್ಗೆ ನಾನೂ ಹೋರಾಟ ನಡೆಸುತ್ತೇನೆ. ಆದರೆ ಹಿಂದೂ ಧರ್ಮ ಮತ್ತು ಹಿಂದುತ್ವ ಎರಡನ್ನೂ ಹೈಜಾಕ್ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು