ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನದ ನಡುವೆ ಇದೀಗ ಯುದ್ಧದ ಭೀತಿ ಸೃಷ್ಟಿಯಾಗಿದೆ. ಗಡಿ ಪ್ರದೇಶದಲ್ಲೂ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಇತ್ತ ಕರ್ನಾಟಕದಲ್ಲೂ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದ್ದು, ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್ ದಯಾನಂದ್ ಖಡಕ್ ಸೂಚನೆ ನೀಡಿದ್ದಾರೆ.
ನಗರದಲ್ಲಿ ಮಾಸಿಕ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಗಡಿ ಭಾಗಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಅವಶ್ಯ ಸಾಮಾಗ್ರಿ ಶೇಖರಿಸಲಾಗುತ್ತಿದೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಹಾಗಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಎಲ್ಲಾ ಕಡೆ ಸಾಮಾನ್ಯವಾದ ಭದ್ರತೆ ಕೈಗೊಳ್ಳಲಾಗುತ್ತಿದೆ. ಪೊಲೀಸರು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಜನರು ಆತಂಕಕ್ಕೆ ಒಳಗಾಗದ ರೀತಿ ತಿಳುವಳಿಕೆ ನೀಡಬೇಕು. ಸುಳ್ಳು ಸುದ್ದಿ ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ಬೆಂಗಳೂರಿನಲ್ಲಿ ಡಿಸಿಪಿಗಳು ಹಾಗೂ ಎಸಿಪಿಗಳು ನಿಗಾ ವಹಿಸಬೇಕು. ಕೇಂದ್ರ, ರಾಜ್ಯ ಸರ್ಕಾರದ ಸೂಚನೆ ಪಾಲಿಸಬೇಕು. ಮಾಕ್ ಡ್ರಿಲ್ ಬಗ್ಗೆ ಜನರಿಗೆ ಪೊಲೀಸರು ಅರಿವು ಮೂಡಿಸಬೇಕು ಎಂದು ಹೇಳಿದ್ದಾರೆ.