ತಿರುವನಂತಪುರಂ: ಕೇರಳದಲ್ಲಿ ರೈಲು ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ಪ್ರಕರಣದ ಪ್ರಮುಖ ಆರೋಪಿ ಶಾರೂಕ್ ಸೈಫಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ. ಆರ್. ಅಜಿತ್ ಕುಮಾರ್ , ಆರೋಪಿ ಶಾರೂಕ್ ಸೈಫಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ಈ ಹಂತದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸೆರೆಸಿಕ್ಕಿದ್ದ ಆರೋಪಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದುಕೊಂಡಿದೆ. ಕೋಯಿಕ್ಕೋಡ್ ವೈದ್ಯಕೀಯ ಮಂಡಳಿಯು ಆರೋಪಿಯು ಸದೃಢ ಎಂದು ಘೋಷಿಸಿದ ನಂತರ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಘಟನೆ ನಡೆದ ಪ್ರದೇಶದಲ್ಲಿ ಹಳಿಗಳ ಮೇಲೆ ಪುಸ್ತಕ ಮತ್ತು ಪೆಟ್ರೋಲ್ ಬಾಟಲಿಯಿದ್ದ ಬ್ಯಾಗ್‌ವೊಂದು ಪತ್ತೆಯಾಗಿದ್ದು, ಅದು ಆರೋಪಿಯದ್ದೇ ಆಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಅಲಪ್ಪುವ – ಕಣ್ಣೂರು ಎಕ್ಸ್‌ಪ್ರೆಸ್ ರೈಲು ಕೋರಪುವ ಎಂಬಲ್ಲಿ ಮೇಲ್ಸೇತುವೆ ಮೇಲೆ ಚಲಿಸುತ್ತಿದ್ದ ವೇಳೆ ಆರೋಪಿ ಬೋಗಿಯೊಂದರ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದ. ಘಟನೆಯಲ್ಲಿ 9 ಮಂದಿ ಗಾಯಗೊಂಡರೆ, ಮೂವರು ಮೃತಪಟ್ಟಿದ್ದರು.