ಹಾಸನ : ಹಾಸನಾಂಬೆಯ ದರ್ಶನ್ ಪಡೆದು ವಾಪಸ್ ಬರುತ್ತಿರುವಾಗ ನಡೆದ ಅಪಘಾತದಲ್ಲಿ ತಂದೆ ಮತ್ತು ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಾಸನದ ತಣ್ಣೀರುಹಳ್ಳದಲ್ಲಿ ನಡೆದಿದೆ. ಕುಮಾರ್ (38) ಮತ್ತು ಕಾವ್ಯಾ (18) ಮೃತ ದುರ್ದೈವಿಗಳು. ತಾಯಿ ಪುಟ್ಟಮ್ಮ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನಾಂಬೆ ದರ್ಶನಕ್ಕೆ ಕುಟುಂಬ ಸಹಿತ ತೆರಳಿದ್ದ ಕುಮಾರ್, ದರ್ಶನ್ ಪಡೆದ ಬಳಿಕ ತಮ್ಮ ಊರಿಗೆ ವಾಪಸಾಗುತ್ತಿದ್ದರು. ಈ ವೇಳೆ ಬಲೆನೋ ಕಾರ್ ಒಂದು ಗುದ್ದಿ ಮೂವರೂ ನೆಲಕ್ಕುರುಳಿದ್ದರು.
ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿದ್ದರಾದರೂ ಅಷ್ಟರಲ್ಲಿ ತಂದೆ ಮಗಳು ಅಸುನೀಗಿದ್ದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಲೆನೋ ಕಾರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.