ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವೇರಿದೆ. ಮತದಾನ ದಿನಾಂಕ ಘೋಷಣೆಯಾಗಿದ್ದು, ಸದ್ಯ ಹೊರ ಬಂದಿರುವ ಚುನಾವಣಾ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ.
ಬುಧವಾರ ಬಿಡುಗಡೆಯಾದ ABP-CVoter ಸಮೀಕ್ಷೆ ಪ್ರಕಾರ ಕಾಂಗ್ರೆಸ್ 115 ರಿಂದ 127 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ನಿರೀಕ್ಷಿಸಲಾಗಿದೆ.
ಆಡಳಿತರೂಢ ಬಿಜೆಪಿ 68 ರಿಂದ 80 ಸೀಟುಗಳಷ್ಟೇ ಗೆಲ್ಲುವ ಸಾಧ್ಯತೆ ಇದ್ದು, ಜನತಾ ದಳ 23 ರಿಂದ 35 ಸೀಟುಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
ಮುಂದಿನ ಸಿಎಂ ಯಾರಾಗಬೇಕೆಂಬ ಪ್ರಶ್ನೆಗೆ 39.1 ಶೇ ಜನರು ಸಿದ್ದರಾಮಯ್ಯ ಹೆಸರು ಸೂಚಿಸಿದ್ದಾರೆ. 31.1 ಶೇ ಜನರು ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದು, ಹೆಚ್ ಡಿ ಕುಮಾರಸ್ವಾಮಿ ಪರ 21.4 ಶೇ ಜನರು ಒಲವು ತೋರಿದ್ದಾರೆ. ಕೇವಲ 3.2 ಶೇ ಜನರಷ್ಟೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಬಯಸಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ 50.5 ಶೇಕಡಾ ಜನರು ರಾಜ್ಯ ಬಿಜೆಪಿ ಸರ್ಕಾರವನ್ನು ಕಳಪೆ ಎಂದಿದ್ದು, ಬಸವರಾಜ್ ಬೊಮ್ಮಾಯಿ ನಾಯಕತ್ವದಲ್ಲಿ ಅಸಮಾಧಾನ ಹೊಂದಿದ್ದಾರೆ. ಕೇವಲ 27.7 ಶೇಕಡಾ ಜನರಷ್ಟೇ ಸರ್ಕಾರದ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
2024 ರ ಲೋಕಸಭಾ ಚುನಾವಣೆಗೆ ಈ ಚುನಾವಣೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ದಕ್ಷಿಣ ಭಾರತದ ದೊಡ್ಡ ರಾಜ್ಯಗಳಲ್ಲಿ ಒಂದರಲ್ಲಿ ಮಾತ್ರ ಇರುವ ನೆಲೆಯನ್ನೂ ಬಿಜೆಪಿ ಕಳೆದುಕೊಳ್ಳುವ ಆತಂಕದಲ್ಲಿದೆ.