ಬೆಂಗಳೂರು: ದೆಹಲಿ-ಬೆಂಗಳೂರು ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿದ ಆರೋಪದ ಮೇಲೆ 40 ವರ್ಷದ ಪ್ರಯಾಣಿಕರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ವಾಯುಯಾನ ಸಂಸ್ಥೆ ಇಂಡಿಗೊ ಅಧಿಕೃತ ಪ್ರಕಟಣೆ ತಿಳಿಸಿದೆ. ವ್ಯಕ್ತಿಯನ್ನು ಕಾನ್ಪುರದ ನವಬಾಗ್‌ಗಂಜ್‌ನ ಪ್ರತೀಕ್ ಎಂದು ಗುರುತಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ 7:56ರ ಸುಮಾರಿಗೆ ಇಂಡಿಗೊ-6E 308 ವಿಮಾನದಲ್ಲಿ ಈ ಘಟನೆ ನಡೆದಿದೆ.
ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಪ್ರತೀಕ್ ಪಾನಮತ್ತ ಸ್ಥಿತಿಯಲ್ಲಿ ತುರ್ತು ನಿರ್ಗಮನ ದ್ವಾರ ತೆರೆಯಲು ಪ್ರಯತ್ನಿಸಿದ್ದಾನೆ. .ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ್ದನ್ನು ಗಮನಿಸಿದ ವಿಮಾನದಲ್ಲಿದ್ದ ಸಿಬ್ಬಂದಿಯು ಕ್ಯಾಪ್ಟನ್‌ಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಕೂಡಲೇ ಪ್ರಯಾಣಿಕರಿಗೆ ಸೂಕ್ತ ಎಚ್ಚರಿಕೆ ನೀಡಲಾಯಿತು. ವಿಮಾನದ ಸುರಕ್ಷಿತ ಕಾರ್ಯಾಚರಣೆಯಲ್ಲಿ ಯಾವುದೇ ರಾಜಿಯಾಗಿಲ್ಲ ಎಂದು ವಾಯುಯಾನ ಸಂಸ್ಥೆ ತಿಳಿಸಿದೆ.
ಬೆಂಗಳೂರಿಗೆ ಬಂದ ನಂತರ ಪ್ರತೀಕ್ ನನ್ನು ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಯಿತು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.