ಸುಳ್ಯ: ಚಿಕನ್ ಸಾಂಬರ್ಗಾಗಿ ತಂದೆಯೇ ಮಗನನ್ನೇ ಹತ್ಯೆಗೈದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೊಗ್ರದಲ್ಲಿ ನಡೆದಿದೆ.
ಗುತ್ತಿಗಾರಿನ ಮೊಗ್ರದ ಶಿವರಾಮ್ (33) ಕೊಲೆಯಾದ ಮಗ. ಶೀನ ಹತ್ಯೆಗೈದ ತಂದೆ. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಶಿವರಾಮನ ಮನೆಯಲ್ಲಿ ಕೋಳಿ ಸಾರು ಮಾಡಲಾಗಿತ್ತು. ಆದರೆ ಶಿವರಾಮ ಕೆಲಸ ಮುಗಿಸಿ ಮನೆಗೆ ಬಂದಾಗ ಕೋಳಿ ಸಾರು ಖಾಲಿಯಾಗಿತ್ತು. ಇದೇ ವಿಚಾರಕ್ಕೆ ತಂದೆಯ ಜೊತೆ ಮಗ ಶಿವರಾಮ್ ಗಲಾಟೆ ಮಾಡಿಕೊಂಡಿದ್ದಾನೆ. ಈ ಗಲಾಟೆ ವಿಕೋಪಕ್ಕೆ ಏರಿದ್ದು, ಕೋಪದಲ್ಲಿ ಶೀನ ಮಗನ ತಲೆಗೆ ಕೋಲಿನಿಂದ ಬಲವಾಗಿ ಹೊಡೆದಿದ್ದಾನೆ.
ತಲೆಗೆ ಗಂಭೀರವಾದ ಏಟು ಬಿದ್ದ ಹಿನ್ನೆಲೆ ಶಿವರಾಮ್ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವರಾಮ್ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಲಾಗಿದೆ.