ಕೇರಳ : ನೆರೆ ರಾಜ್ಯ ಕೇರಳದಲ್ಲಿ (Kerala) ಶಿಗೆಲ್ಲಾ ಎಂಬ ಅಪಾಯಕಾರಿ ಬ್ಯಾಕ್ಟೀರಿಯಾ (Shigella bacteria) ಸೋಂಕಿನಿಂದಾಗಿ (Infection) ನಾಲ್ಕು ವರ್ಷದ ಬಾಲಕಿಯೊಬ್ಬಳು ಕೋಯಿಕ್ಕೋಡ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ಮಾರಣಾಂತಿಕ ಕಾಯಿಲೆಗೆ ಕೇರಳದಲ್ಲಿ ವರದಿಯಾದ ಮೊದಲ ಸಾವು ಇದಾಗಿದೆ. ಇತ್ತೀಚೆಗೆ ಸೋಂಕಿನ ಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ಇತರ ಇಬ್ಬರು ಮಕ್ಕಳು ಅದೃಷ್ಟವಶಾತ್ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಪ್ರಸ್ತುತ ಆಲಪ್ಪುಳ ಹಾಗೂ ಪತ್ತನಂತಿಟ್ಟ ಭಾಗಗಳಲ್ಲಿ ನೂರಕ್ಕೂ ಹೆಚ್ಚು ಜನರಲ್ಲಿ ಈ ರೀತಿಯ ಕಾಯಿಲೆ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಾದ್ಯಂತ ತಪಾಸಣೆಯನ್ನು ತೀವ್ರಗೊಳಿಸಿದೆ. ಮುಖ್ಯವಾಗಿ ಕುಡಿಯುವ ನೀರಿನ ಮೂಲಗಳಾದ ಬಾವಿ ಮತ್ತು ಕೊಳವೆಬಾವಿಗಳ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕರುಳಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವ ಈ ಬ್ಯಾಕ್ಟೀರಿಯಾವು ಕಲುಷಿತ ನೀರು ಮತ್ತು ಕಳಪೆ ಆಹಾರ ಸೇವನೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಇದನ್ನೂ ಓದಿ FACTS : ಸೊಳ್ಳೆಗೆ ಎಷ್ಟು ಹಲ್ಲು ಗೊತ್ತಾ? ಈ ಪುಟ್ಟ ಜೀವಿಗಳ ‘ಖತರ್ನಾಕ್’ ಸೀಕ್ರೆಟ್ಸ್ ಇಲ್ಲಿದೆ
ಜ್ವರ, ತೀವ್ರ ಹೊಟ್ಟೆನೋವು ಹಾಗೂ ಅತಿಸಾರದಂತಹ ತೊಂದರೆಗಳು ಇದರ ಪ್ರಮುಖ ಲಕ್ಷಣಗಳಾಗಿವೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಡ್ಡಾಯವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಮತ್ತು ಕಾಯಿಸಿ ಆರಿಸಿದ ನೀರನ್ನೇ ಬಳಸುವಂತೆ ಆರೋಗ್ಯ ಸಚಿವರು ಜಾಗೃತಿ ಮೂಡಿಸಿದ್ದಾರೆ. ಮತ್ತೊಂದೆಡೆ ವಯನಾಡ್ ಭಾಗದ ಶಾಲಾ ಮಕ್ಕಳಲ್ಲಿ ಕಂಡುಬಂದಿದ್ದ ವಾಂತಿ ಸಮಸ್ಯೆಗೆ ಈ ಬ್ಯಾಕ್ಟೀರಿಯಾ ಕಾರಣವಲ್ಲ ಎಂದು ಪ್ರಾಥಮಿಕ ವರದಿ ತಿಳಿಸಿದೆ.