ವಾಷಿಂಗ್ಟನ್: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿ 8 ಜನರು ಮೃತಪಟ್ಟಿದ್ದು, ಅದರಲ್ಲಿ ಭಾರತೀಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರು ಗುಜರಾತಿನ ಮೆಹ್ಸಾನಾ ಜಿಲ್ಲೆಯವರಾಗಿದ್ದು, ಪ್ರವೀಣ್ ಬಾಯ್ ಚೌಧರಿ, ಪತ್ನಿ ದಕ್ಷಾಬೆನ್ ಚೌಧರಿ, ಮಕ್ಕಳಾದ ಮೀತ್ ಚೌಧರಿ ಹಾಗೂ ವಿಧಿ ಚೌಧರಿ ಎಂದು ಗುರುತಿಸಲಾಗಿದೆ. ಕೆನಡಾದ ಕೋಸ್ಟ್ ಗಾರ್ಡ್‌ನ ವೈಮಾನಿಕ ಶೋಧದ ಸಮಯದಲ್ಲಿ ಕ್ವಿಬೆಕ್ ಜವುಗು ಪ್ರದೇಶದಲ್ಲಿ ಮುಳುಗಿದ್ದ ಬೋಟ್‌ನಿಂದ ಪೊಲೀಸರು 8 ಶವಗಳನ್ನು ಹೊರತೆಗೆದಿದ್ದಾರೆ. ಮೃತರೆಲ್ಲರೂ ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಪತ್ತೆಯಾದ ಶವಗಳಲ್ಲಿ ಒಂದು ಮೂರು ವರ್ಷದೊಳಗಿನ ಮಗುವಿನದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಮೃತದೇಹದ ಜೊತೆ ಕೆನಡಾದ ಪಾಸ್‌ಪೋರ್ಟ್ ಪತ್ತೆಯಾಗಿದೆ. ಮಗು ರೊಮೇನಿಯಾ ಕುಟುಂಬದ್ದಾಗಿದೆ ಎಂದು ತಿಳಿದುಬಂದಿದೆ.