ತುಮಕೂರು: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಕಡಲೆ ಚಿಕ್ಕಿ ತಿಂದು 45 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೋಣನಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟದ ವೇಳೆ ಕಡಲೆ ಚಿಕ್ಕಿಯನ್ನು ನೀಡಲಾಗಿತ್ತು. ಅದನ್ನು ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಚಿಕ್ಕಿ ಸೇವಿಸಿದ ಬಳಿಕ ಮಕ್ಕಳಲ್ಲಿ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ.
ತಕ್ಷಣ ಮಕ್ಕಳನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಎಲ್ಲಾ ಮಕ್ಕಳು ಚೇತರಿಸಿಕೊಂಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ವರದರಾಜು, ಬಿಇಒ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ವಿದ್ಯಾರ್ಥಿಗಳಿಗೆ ಬಿಸಿಯೂಟದೊಂದಿಗೆ ನೀಡಿದ್ದ ಚಿಕ್ಕಿಯು ದುರ್ವಾಸನೆಯಿಂದ ಕೂಡಿದ್ದು ಅದರಲ್ಲಿ ಹುಳು ಸಿಕ್ಕಿದೆ. ಇದರಿಂದಲೇ ಹೊಟ್ಟೆನೋವು ಹಾಗೂ ವಾಂತಿಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.