ಪಾಟ್ನಾ: ಗಂಗಾ ನದಿಯಲ್ಲಿ ಸಾಗುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, ಮೂವರು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ.
17 ಜನರು ಇದ್ದ ದೋಣಿ, ಅಹಮದಾಬಾದ್ ಪ್ರದೇಶದ ಗೋಲಾಘಾಟ್ ಬಳಿ ಸಂಚರಿಸುತ್ತಿತ್ತು. ಆ ದೋಣಿ ಮಗುಚಿಬಿದ್ದು ಅದರಲ್ಲಿದ್ದ 10 ಮಂದಿಯನ್ನು ರಕ್ಷಿಸಲಾಗಿದೆ. 3 ಜನರು ಸಾವನಪ್ಪಿದ್ದು, ಇನ್ನೂ 4 ಜನರು ನಾಪತ್ತೆಯಾಗಿದ್ದಾರೆ. ದೋಣಿ ಮಗುಚಿ ಬಿದ್ದಾಗ ಈಜು ಬರುವವರು, ಈಜಿಕೊಂಡೇ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದು, ನಾಪತ್ತೆಯಾದ ನಾಲ್ವರನ್ನು ಹುಡುಕುವ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಕುರಿತಾದ ವಿಚಾರಣೆಗೆ ಈಗಾಗಲೇ ಆದೇಶ ನೀಡಲಾಗಿದೆ. ದೋಣಿ ಮಗುಚಿ ಬೀಳಲು ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ ಹಾಗೂ ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಮನೇಶ್ ಕುಮಾರ್ ಮೀನಾ ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಇಬ್ಬರನ್ನು ಪವನ್ ಕುಮಾರ್ (60) ಮತ್ತು ಸುಧೀರ್ ಮಂಡಲ್ (70) ಎಂದು ಗುರುತಿಸಲಾಗಿದ್ದು, ಮೂರನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.