2ಎ ಮೀಸಲಾತಿಗಾಗಿ ಆಗ್ರಹಿಸಿ ಲಿಂಗಾಯಿತ ಪಂಚಮಸಾಲಿ ನಡುಸುತ್ತಿದ್ದ ಸಾಮುದಾಯಿಕ ಹೋರಾಟಕ್ಕೆ ಒಂದು ಸುತ್ತಿನ ಜಯ ಸಿಕ್ಕಿದಂತಾಗಿದೆ. ಕೇಂದ್ರ ಸರ್ಕಾರದ ಸಾಲಿಸಿಟರ್ ಇಂದು ಹೈಕೋರ್ಟ್‍ನಲ್ಲಿ ಪಂಚಮಸಾಲಿ ಹಾಗೂ ಒಕ್ಕಲಿಗರ ಸಮುದಾಯಕ್ಕೆ ಮೀಸಲಾತಿ ನೀಡಲು ಯಾವುದೇ ತೊಡಕು ಇಲ್ಲವೆಂದು ಹೈಕೋರ್ಟ್ ಮುಂದೆ ವಾದ ಮಂಡಿಸಿದ್ದಾರೆ. ಇದನ್ನು ಸಮ್ಮತಿಸಿದ ಹೈಕೋರ್ಟ್ 2ಎ ಮೀಸಲಾತಿ ಅರ್ಜಿ ವಿಚಾರಣೆಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.
ಪ್ರಕರಣದ ಹಿನ್ನೆಲೆಯೇನು?
ಮೀಸಲಾತಿ ವಂಚಿತ ಸಮುದಾಯವಾದ ಪಂಚಮಸಾಲಿಯಲ್ಲಿ ಸಾಕಷ್ಟು ಮಂದಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಇವರಿಗೆ 2ಎ ಮೀಸಲಾತಿ ನೀಡಬೇಕು ಎಂದು ಪಂಚಮಸಾಲಿ ಸಮುದಾಯ ಬಸವಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿತ್ತು. ಈ ಹೋರಾಟ ಸಮಿತಿಗೆ ಬಸವನ ಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯಾನಂದ ಕಾಶ್ಯಪ್ಪನವರ್ ಕ್ರಮವಾಗಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯಧ್ಯಕ್ಷರಾಗಿ ಹೊಣೆಗಾರಿಕೆ ವಹಿಸಿಕೊಂಡಿದ್ದರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಈ ಹೋರಾಟಕ್ಕೆ ಬೆಂಬಲ ಸಿಕ್ಕಿದ್ದು, ಬೆಂಗಳೂರಿನ ಸ್ವಾತಂತ್ರ್ಯ ಮೈದಾನದಲ್ಲಿ 84 ದಿನಗಳ ನಿರಂತರ ಪ್ರತಿಭಟನೆ ನಡೆಸಲಾಗಿತ್ತು. ಚುನಾವಣೆ ಹತ್ತಿರದಲ್ಲಿರುವ ಸಮಯದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಪಂಚಮಸಾಲಿ ಸಮುದಾಯ ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಲಾರಂಭಿಸಿತ್ತು.
ಮತ್ತೊಂದೆಡೆ 2ಎ ಮೀಸಲಾತಿ ಪಡೆಯುತ್ತಿರುವ ಸಮುದಾಯಗಳು, ಪಂಚಮಸಾಲಿ ಹಾಗೂ ಒಕ್ಕಲಿಗರನ್ನು 2ಎ ಪಟ್ಟಿಯಡಿ ಸೇರಿಸಬಾರದೆಂದು ಹೈಕೋರ್ಟ್ ಗೆ ತಕರಾರು ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಈ ಬಗ್ಗೆ ಪರಿಶೀಲನೆ ನಡೆದು ವರದಿ ಬರುವವರೆಗೂ ಯಥಾಸ್ಥಿತಿ ಕಾಪಾಡಬೇಕೆಂದು ಆದೇಶಿಸಿತ್ತು.
ಆದರೆ ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದರಿಂದ ಬೇರೆ ಯಾವುದೇ ಸಮುದಾಯಕ್ಕೆ ತೊಂದರೆ ಉಂಟಾಗುವುದಿಲ್ಲ ಎಂಬ ವಾದದಿಂದ ಈ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.
ಕೇಂದ್ರದಿಂದ ಸಚಿವರು ಕರ್ನಾಟಕಕ್ಕೆ ಬಂದಿದ್ದಾಗ ಸಚಿವೆ ಶೋಭಾ ಕರಂದ್ಲಾಜೆ ಈ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಹಿಂದೆಯೇ ಪ್ರಧಾನಿ ಮೋದಿ ಕಾರ್ಯಾಲಯದಿಂದ ಬಸವ ಮೃತ್ಯುಂಜಯ ಸ್ವಾಮೀಜಿಯವರಿಗೆ ಕರೆ ಬಂದಿದ್ದು, ಇಷ್ಟರಲ್ಲೇ ಸಿಹಿ ಸುದ್ದಿ ನೀಡುತ್ತೇವೆ ಎಂಬ ಸಂದೇಶ ರವಾನಿಸಲ್ಪಟ್ಟಿತ್ತು.
ಇಂದು ಅಥವಾ ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.