ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಘೋರ ದುರಂತ ನಡೆದಿದೆ. ಜೆಸಿಬಿ ಹರಿದು 2 ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಕಾಡುಗೋಡಿ ಬಳಿಯ ಸಿಟಿ ಲೇಔಟ್ ನಲ್ಲಿ ನಡೆದಿದೆ.
ಚಾಲಕನ ಅಜಾಗರೂಕ ಚಾಲನೆಯಿಂದಾಗಿ 2 ವರ್ಷದ ಮಗು ಪ್ರಾಣ ಕಳೆದುಕೊಂಡಿದೆ. ಮನೆಯ ಮುಂದೆ ಆಟವಾಡುತ್ತಿದ್ದ 2 ವರ್ಷದ ಥನವ್ ರೆಡ್ಡಿ ಮೇಲೆ ಜೆಸಿಬಿ ಹರಿದಿದ್ದು, ಗಂಭೀರವಾಗಿ ಮಗು ಗಾಯಗೊಂಡಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ.
ಜೆಸಿಬಿ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದ. ಇದರಿಂದಲೇ ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಮಗುವನ್ನು ವೈದೇಹಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದೆ. ಇದೀಗ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಲಾಗಿದೆ.
ಘಟನೆ ಸಂಬಂಧ ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಘಟನೆಯ ಬಳಿಕ ಜೆಸಿಬಿ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.