ರಾಹುಲ್ ಗಾಂಧಿಯ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಕುರಿತು ಪ್ರತಿಭಟನೆ ನಡೆಸಿದ 16 ಕಾಂಗ್ರೆಸ್ ಶಾಸಕರನ್ನು ಗುಜರಾತ್ ವಿಧಾನಸಭೆ ಸ್ಪೀಕರ್ ಮಾರ್ಚ್ 29 ರವರೆಗೆ ಸದನದಿಂದ ಅಮಾನತುಗೊಳಿಸಿದ್ದಾರೆ. ಗುಜರಾತಿನಲ್ಲಿ 17 ಕಾಂಗ್ರೆಸ್ ಶಾಸಕರಿದ್ದು, ಅವರಲ್ಲಿ 16 ಮಂದಿಯನ್ನು ಅಮಾನತುಗೊಳಿಸಿರುವುದು ರಾಜಕೀಯವ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸ್ಪೀಕರ್ ಶಂಕರ್ ಚೌಧರಿ ಅವರು ಕಾಂಗ್ರೆಸ್ ಶಾಸಕರ ನೇತೃತ್ವದ ಪ್ರತಿಭಟನೆಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದು, ಪ್ರತಿಭಟನೆ ತಣ್ಣಗಾಗಾದಾಗ ಇಮ್ರಾನ್ ಖೇಡಾವಾಲಾ, ಗೆನಿಬೆನ್ ಠಾಕೂರ್ ಮತ್ತು ಅಮೃತ್‌ಜಿ ಠಾಕೋರ್ ಸೇರಿದಂತೆ ಪ್ರತಿಭಟನಾ ನಿರತ ಶಾಸಕರನ್ನು ಹೊರಹಾಕಲು ಮಾರ್ಷಲ್‌ಗಳನ್ನು ಕರೆಸಿದ್ದಾರೆ. ಅನಂತ್ ಪಟೇಲ್ ಎಂಬ ಶಾಸಕರನ್ನು ಹೊರತುಪಡಿಸಿ ಉಳಿದ 16 ಕಾಂಗ್ರೆಸ್ ಶಾಸಕರು ಸೋಮವಾರ ಸದನದಲ್ಲಿ ಹಾಜರಿದ್ದರು.
ಪ್ರತಿಭಟನಾ ಸಂಕೇತವಾಗಿ ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್ ಶಾಸಕರು ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸುವ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಇತರೆ ಚರ್ಚೆಗೆ ಅವಕಾಶವಿಲ್ಲವೆಂದು ಸ್ಪೀಕರ್ ಹೇಳಿದ್ದು, ಈ ವೇಳೆ ಸದನದ ಬಾವಿಗೆ ಬಂದ ಶಾಸಕರು “ಮೋದಿ-ಅದಾನಿ ಭಾಯಿ ಭಾಯಿ” ಎಂದು ಘೋಷಣೆಗಳನ್ನು ಕೂಗಿದ್ದಾರೆ.