ತಿರುಪತಿ (Tirupati).. ಕೋಟ್ಯಾನೂ ಕೋಟಿ ಹಿಂದೂಗಳ ಪವಿತ್ರ ಯಾತ್ರಾತಾಣ. ಭೂಮಿಯ ಮೇಲಿನ ವೈಕುಂಠ. ಆ ಪರಮ ಪವಿತ್ರ ದೇಗುಲಕ್ಕೆ ಸಿಲಿಂಡರ್ ಬಿಸಿ ತಟ್ಟಿಲ್ಲ.
ಪಶ್ಚಿಮ ಏಷ್ಯಾ ಸಂಘರ್ಷ ಭಾರತದಲ್ಲಿ ಎಲ್ಪಿಜಿ ಬಿಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಈ ಬಿಕ್ಕಟ್ಟು ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆ, ಅನ್ನದಾನಂ ಪ್ರಸಾದ ತಯಾರಿಕೆಯಲ್ಲಿ ಯಾವುದೇ ಅಡಚಣೆ ಉಂಟುಮಾಡಿಲ್ಲ. ವಿಶ್ವವಿಖ್ಯಾತ ವೆಂಕಟೇಶ್ವರ ಸ್ವಾಮಿ ದೇಗುಲದ ಆಡಳಿತವನ್ನು ಟಿಟಿಡಿ ನಡೆಸುತ್ತಿದ್ದು, ಪ್ರತಿನಿತ್ಯ ಬರುವ ಲಕ್ಷಾಂತರ ಭಕ್ತರಿಗೆ ಲಡ್ಡು ಮತ್ತು ಅನ್ನ ಪ್ರಸಾದ ಸೇವೆ ನೀಡಲಾಗುತ್ತಿದೆ.
ನಿತ್ಯ ತಿರುಪತಿ ಪ್ರಸಾದ ತಯಾರಿಕೆಗೆ ಬೇಕು 10 ಟನ್ ಗ್ಯಾಸ್!
ತಿರುಮಲದಲ್ಲಿ ಪ್ರತಿದಿನ ಸುಮಾರು 4 ಲಕ್ಷ ಲಡ್ಡು ತಯಾರಿಸಲಾಗುತ್ತಿದೆ. ಹಬ್ಬ – ಹರಿದಿನಗಳ ಸಂದರ್ಭದಲ್ಲಿ 10 ಲಕ್ಷಕ್ಕೆ ಏರುತ್ತದೆ. ತಿರುಮಲದಲ್ಲಿ ಲಡ್ಡು ತಯಾರಿಕೆ ಮತ್ತು ಅನ್ನದಾನ ಘಟಕಗಳಿಗೆ ಒಟ್ಟಾರೆ ಅಡುಗೆ ಅನಿಲದ ಅವಶ್ಯಕತೆ ದಿನಕ್ಕೆ 10 ಟನ್‌ಗಳಿಗಿಂತ ಹೆಚ್ಚು ಎಂದು ಮಾಹಿತಿ ನೀಡಿದ್ದಾರೆ.
ತಿರುಪತಿಗೆ ಹೇಗೆ ಬರುತ್ತೆ ಗ್ಯಾಸ್!
ಲಡ್ಡು ತಯಾರಿಕೆ ಮತ್ತು ಮುಖ್ಯ ಅನ್ನದಾನ ಕೇಂದ್ರಕ್ಕೆ ಪೈಪ್ ಮೂಲಕ ಅನಿಲ ಸರಬರಾಜು ಆಗುತ್ತದೆ. ಆದರೆ ಇತರ ಅನ್ನದಾನ ಘಟಕಗಳಿಗೆ ಸಿಲಿಂಡರ್‌ಗಳನ್ನು ಬಳಸಲಾಗುತ್ತದೆ. ತಿರುಪತಿಯ ಅನ್ನದಾನಂ ಕೇಂದ್ರದಲ್ಲಿ ದಿನಕ್ಕೆ 75,000 ಊಟವನ್ನು ಸಿದ್ಧ ಮಾಡಲಾಗುತ್ತದೆ. ಎಲ್ಲಾ ಕೇಂದ್ರಗಳಲ್ಲಿ ಸುಮಾರು 2 ಲಕ್ಷದ 25 ಸಾವಿರ ಸೇವೆ ನೀಡಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಅನ್ನದಾನಂ ಕೇಂದ್ರದ ಆಹಾರ ತಯಾರಿ 3 ಲಕ್ಷ ದಾಟುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳರು ಬರ್ತಾರೆ.. ಕದ್ಕೊಂಡ್ ಹೋಗ್ತಾರೆ
ಸಿಲಿಕಾನ್ ಸಿಟಿಯಲ್ಲಿ ಗ್ಯಾಸ್ ಸಿಲಿಂಡರ್ ಸಂಕಷ್ಟ ಜೋರಾಗಿದೆ. ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಜೋಪಾನವಾಗಿರಿ.. ಯಾಕೆಂದರೆ, ಬೆಂಗಳೂರಲ್ಲಿ ಸಿಲಿಂಡರ್ ಕಳ್ಳರ ಕಾಟ ಹೆಚ್ಚಾಗಿದೆ. ನಾಗರಭಾವಿಯ ಕಲ್ಯಾಣನಗರದಲ್ಲಿ ಮನೆಯ ಮುಂದಿದ್ದ ಸಿಲಿಂಡರ್ ಎಗರಿಸಲಾಗಿದೆ.
ಗ್ಯಾಸ್ ಬರ ಸಿಡಿಲಿಗೆ ಬೆಂಡಾದ ಅನ್ನದಾತ
ಸಿಲಿಂಡರ್ ಸಮಸ್ಯೆಯಿಂದ ಗೋವಾದಲ್ಲಿ ಹೋಟೆಲ್ ಬಂದ್ ಆಗುತ್ತಿವೆ. ಗೋವಾಕ್ಕೆ ರಫ್ತಾಗುತ್ತಿದ್ದ ಅಪಾರ ಪ್ರಮಾಣದ ತರಕಾರಿ ಬೆಳಗಾವಿ ಎಪಿಎಂಸಿಯಲ್ಲಿ ಕೊಳೆಯುತ್ತಿದೆ. ಸೂಕ್ತ ಬೇಡಿಕೆಯಿಲ್ಲದೆ, ಉತ್ತಮ ಬೆಲೆ ಸಿಗದೇ, ರೈತರು ಕಂಗಾಲಾಗಿದ್ದಾರೆ.
ಗ್ಯಾಸ್ ‘ಬರ’ ಸಿಡಿಲಿಗೆ ಹಾಸ್ಟೆಲ್‌ನಲ್ಲಿ ಪರದಾಟ
ಬೆಂಗಳೂರಿನ ಮಹಾರಾಣಿ ಕಾಲೇಜು ಹಾಸ್ಟೆಲ್‌ಗೂ ಸಂಕಷ್ಟ ಎದುರಾಗಿದೆ. ವಿದ್ಯಾರ್ಥಿನಿಯರಿಗೆ ಉಪವಾಸ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಸ್ಟೆಲ್‌ನಲ್ಲಿ ಇಂದಿಗೆ ಮಾತ್ರ ಅಡುಗೆ ಅನಿಲ ದಾಸ್ತಾನು ಇದ್ದು, ನಾಳೆಯಿಂದ ಅನಿವಾರ್ಯವಾಗಿ ಮೆಸ್ ಬಂದ್ ಮಾಡಬೇಕಾಗುತ್ತೆ. ಆಗ 1 ಸಾವಿರ ವಿದ್ಯಾರ್ಥಿನಿಯರಿಗೆ ಸಮಸ್ಯೆ ಆಗಲಿದೆ.
ಬಿಸಿಎಂ ಹಾಸ್ಟೆಲ್‌ಗಳಿಗೂ ತಟ್ಟಿದ ಗ್ಯಾಸ್ ಬಿಸಿ
ದಾವಣಗೆರೆ ನಗರದ 14 ಹಾಸ್ಟೆಲ್‌ಗಳಲ್ಲಿ ಮೆನು ಬದಲಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಚಪಾತಿ, ದೋಸೆ, ಪೂರಿ ನೀಡಬೇಡಿ, ಮುದ್ದೆ, ಅನ್ನ, ಸಾಂಬರ್ ವಿತರಿಸುವಂತೆ ಹಿಂದುಳಿದ ವರ್ಗಗಳ ಇಲಾಖೆ ತಿಳಿಸಿದೆ.