ಬೆಂಗಳೂರು: ಜೆಡಿಎಸ್ ಪಕ್ಷದ ಬೆಳವಣಿಗೆ ಎರಡು ರಾಷ್ಟೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಳಮಳವನ್ನುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜೆಡಿಎಸ್ ಪಕ್ಷವನ್ನು ಮುಗಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿವೆ. ಆದ್ರೆ ಸತ್ಯ ಏನಂದ್ರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೇವಲ ಅಬ್ಬರ ಮಾಡುತ್ತಿವೆ ಅಷ್ಟೇ, ಆದರೆ ಈ ಎರಡೂ ಪಕ್ಷಗಳು 80 ಸೀಟ್ ಗೆಲ್ಲೋದು ಕಷ್ಟ ಎಂದ್ರು
ಚುನಾವಣೆಯ ನೈಜ ವಾಸ್ತವತೆ ನನಗೆ ತಿಳಿದಿದೆ. ಈ ಎರಡು ಪಕ್ಷಗಳ ರಾಜ್ಯ ನಾಯಕರು 140 ಸ್ಥಾನಗಳನ್ನು ಗೆಲ್ಲುವುದು ಕಷ್ಟಸಾಧ್ಯ. ಯಾರು ಏನೇ ಹೇಳಿದರೂ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 123 ಸ್ಥಾನಗಳನ್ನು ಗೆಲ್ಲೋದು ಗ್ಯಾರೆಂಟಿ ಎಂದ್ರು.
ಜೆಡಿಎಸ್‌ನ ಕಾರ್ಯ ಚಟುವಟಿಕೆಗಳು ಏಪ್ರಿಲ್ 10ರವರೆಗೆ ಮುಂದುವರೆಯಲಿದ್ದು, ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. 123 ಸ್ಥಾನಗಳನ್ನು ಗೆಲ್ಲಿಸಬೇಕೆಂದು ಮತದಾರರೇ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಸರಕಾರವು ಹಣ ಪಡೆದು ಸರಕಾರಿ ನೌಕರಿ ಕೊಡ್ತಾ ಇದೆ. ಮೀಸಲಾತಿ ಮೇಲೆ ನೌಕರಿ ಕೊಡ್ತಾ ಇಲ್ಲ. ಹಾಗಾದರೆ, ಮೀಸಲಾತಿ ತಗೊಂಡು ಏನ್ ಮಾಡೋದು? ಹಣ ಕೊಟ್ಟವರಿಗೆ ಸರಕಾರಿ ನೌಕರಿ ಮಾರಾಟ ಆಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಂತಹ ಅವೈಜ್ಞಾನಿಕ, ತಾರತಮ್ಯದ ಮೀಸಲಾತಿ ವ್ಯವಸ್ಥೆಯನ್ನು ತೆಗೆದು ಹಾಕುತ್ತೇವೆ. ಅಷ್ಟೆ ಅಲ್ಲ, ಈ ಹಣ ಫಿಕ್ಸ್ ಮಾಡಿ ನೌಕರಿ ಕೊಡ್ತೀರಲ್ಲಾ, ಅದನ್ನು ನಿರ್ನಾಮ ಮಾಡುತ್ತೇವೆ. ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಸರಿಯಾದ ಚಿಕಿತ್ಸೆ ನೀಡುತ್ತೇವೆ. ನೇಮಕಾತಿ ಮಾಡುವ ಸಂಸ್ಥೆಗಳಿಗೆ ತಕ್ಕ ಶಾಸ್ತಿ ಮಾಡಿ ವ್ಯವಸ್ಥೆಯನ್ನು ಸುಧಾರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ರು.