ದೆಹಲಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಎರಡನೇ ಮತ್ತು ಅಂತಿಮ ಆಯ್ಕೆಯ ಪಟ್ಟಿ ಮಂಗಳವಾರ ತಡರಾತ್ರಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣ್‍ದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆ ನೀಡಿದ್ದಾರೆ.
ಇಂದು ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಇದೇ ಕಾರಣಕ್ಕಾಗಿ ಸಭೆ ಸೇರಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್ ಸೇರಿದಂತೆ ಹಲವರು ಸಭೆಯಲಿ ಭಾಗವಹಿಸಿದ್ದಾರೆ. ಈ ಮುನ್ನ ಬಿಡುಗಡೆಯಾಗಿದ್ದ ಮೊದಲ ಪಟ್ಟಿಯಲ್ಲಿ 124 ಮಂದಿ ಸ್ಥಾನ ಪಡೆದಿದ್ದು, ಮಿಕ್ಕ 100 ಅಭ್ಯರ್ಥಿಗಳ ಪಟ್ಟಿಯನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದರು.
ಈಗಾಗಲೇ ಟಿಕೆಟ್ ವಂಚಿತರಿಂದ ಭಿನ್ನಮತ ಸ್ಪೋಟಗೊಂಡಿದ್ದು, ಹಲವು ಕಾಂಗ್ರೆಸ್ ನಾಯಕರು ಬಿಜೆಪಿ, ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. ಅವಕಾಶ ವಂಚಿತ ಅಭ್ಯರ್ಥಿಗಳನ್ನು ಕಾಯ್ದುಕೊಳ್ಳುವ ಹೊಣೆಗಾರಿಕೆಯೂ ಕಾಂಗ್ರೆಸ್ ನಾಯಕರ ಮೇಲಿದ್ದು, ಈ ಕುರಿತು ಕಾಂಗ್ರೆಸ್ ವರಿಷ್ಠರು ಇಂದು ದೆಹಲಿಯಲ್ಲಿ ಚರ್ಚೆ ನಡೆಸಲಿದ್ದಾರೆ.